ಕೇಂದ್ರ ಪುರಸ್ಕೃತ ಯೋಜನೆಗಳು ಜನತೆಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು:
ಯಾದಗಿರಿ ಟೈಮ್ಸ್ ವಾರ್ತೆ 29-08-2025
ಯಾದಗಿರಿ: ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ ವಾರ್ತಾಲಾಪ ಕಾರ್ಯಾಗಾರವು ಬಹಳ ಅನುಕೂಲಕರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚುರಪಡಿಸುವುದರಿಂದ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳು ತಲುಪಲಿವೆ ಎಂದು ಶಾಸಕರಾದ ಚನ್ನಾರೆಡ್ಡಿ ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)., ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘ (ರಿ). ಜಿಲ್ಲಾ ಘಟಕ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಎಸ್ ಡಿ ಎನ್ ಹೋಟೆಲ್ ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ “ವಾರ್ತಾಲಾಪ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಿಗೆ ಈ ಕಾರ್ಯಾಗಾರ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿ. ಇದರಿಂದ ಸರ್ಕಾರದ ಜನಪರ ಯೋಜನೆಗಳಿಗೆ ಹೆಚ್ಚಿನ ಮಾಹಿತಿ ಜನತೆಗೆ ಸಿಕ್ಕು ಅನುಕೂಲವಾಗಲಿದೆ ಎಂದರು.
ಭಾರತ ಸರ್ಕಾರದ ವಾರ್ತಾ ಶಾಖೆಯ, ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಮಾತನಾಡಿ, ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯಿಂದ ಹೊಸದಾಗಿ 264 ಸಮುದಾಯ ಬಾನುಲಿ ಕೇಂದ್ರಗಳು, 6 ದೂರದರ್ಶನ ವಾಹಿನಿಗಳಿಗೆ ಅನುಮೋದನೆ ನೀಡಲಾಗಿದೆ.
ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಉಮಂಗ್ ಅಪ್ಲಿಕೇಷನ್ ಸೇರಿದಂತೆ ವಿಶೇಷವಾಗಿ ರೈತರಿಗೆ, ಯುವಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ಆರೋಗ್ಯ, ವಸತಿ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ, ಆರೋಗ್ಯ ವಲಯದಲ್ಲಿ ಆಯುಷ್ಮಾನ್ ಭಾರತ, ಜನೌಷಧಿ ಕೇಂದ್ರಗಳು ಸೇರಿದಂತೆ ಜನಪ್ರಿಯ ಯೋಜನೆ ಹಾಗೂ ಉಪಕ್ರಮಗಳು ಅನುಷ್ಠಾನಗೊಂಡಿವೆ. ಇವುಗಳಿಗೆ ಮಾಧ್ಯಮದವರು ಇನ್ನೂ ಹೆಚ್ಚಿನ ಪ್ರಚಾರ ಒದಗಿಸಿದರೆ, ಜನರು ಅವುಗಳ ಮಾಹಿತಿ ಪಡೆದು, ಅದರ ಅನುಕೂಲ ಪಡೆಯುತ್ತಾರೆ ಎಂದರು.
ಕೇAದ್ರ ಸರ್ಕಾರದ ಯೋಜನೆಗಳು ರಾಜ್ಯ ಸರ್ಕಾರದ ಮೂಲಕವೇ ಅನುಷ್ಠಾನವಾಗುತ್ತವೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಯೋಜನೆಗಳ ಸಮರ್ಪಕ ಅನುಷ್ಠಾನ ಕಾಣಬಹುದು ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮಾತನಾಡಿ, ನಮ್ಮದು ಮಹತ್ವಾಕಾಂಕ್ಷಿ ಜಿಲ್ಲೆ, ಕೃಷಿಯಾಧಾರಿತ ಜಿಲ್ಲೆಯಾಗಿದ್ದು, ಇಲ್ಲಿನ ಸುಸ್ಥಿರ ಕೃಷಿ, ತೋಟಗಾರಿಕೆ, ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಈ ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ದೊರಕಲಿದೆ. ಇದರ ಜೊತೆಗೆ ಉದ್ಯೋಗಾವಕಾಶ, ಜೀವ ವಿಮೆ, ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ ಮುಂತಾದ ಕ್ಷೇತ್ರಗಳ ಜನಪರ ಯೋಜನೆಗಳ ಮಾಹಿತಿಗಳನ್ನು ಪತ್ರಕರ್ತರು ತಿಳಿದುಕೊಂಡು ಅದನ್ನು ಜನರಿಗೆ ಮುಟ್ಟಿಸುವುದು ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಮಾತನಾಡಿ, ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಪರಿಗಣಿಸಲಾಗುತ್ತದೆ. ಮಾಧ್ಯಮದವರು ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಅದರಲ್ಲಿರುವ ಸತ್ಯಪರತೆಗೂ ಒತ್ತು ನೀಡಬೇಕು. ಈಗಿನ ಕಾಲಕ್ಕೆ ಜವಾಬ್ದಾರಿಯ ವರದಿಗಾರಿಕೆ ಹೆಚ್ಚು ಅವಶ್ಯವಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಸಹಾಯವಾಣಿಯನ್ನು ಜಾರಿಗೊಳಿಸಿದೆ. ಅದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಮಾತನಾಡಿ, ಸರ್ಕಾರದ ಅನೇಕ ಯೋಜನೆಗಳು ಮೊದಲು ಮಾಧ್ಯಮದವರಿಗೆ ತಿಳಿಯಬೇಕು. ಆಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅನುಕೂಲವಾಗುತ್ತದೆ. ಪತ್ರಕರ್ತರಲ್ಲಿ ಅಧ್ಯಯನ ಆಧಾರಿತ ಲೇಖನಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕು. ಲಲಿತಾ ಅನಪೂರ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಯುಡಾ ಅಧ್ಯಕ್ಷ ಬಾಬೂರಾವ್ ಕಾಡ್ಲೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ಡಿ. ನದಾಫ್, ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಲಿಂಗೇರಿ ಅವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಯಾದಗಿರಿ ಜಿಲ್ಲೆಯ ನೂರಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದರು.
.jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ